Heli Hogu Kaarana Book - Summary
ನಾನು ತುಂಬಾ ಪ್ರೀತಿಸುವ ಲೇಖಕ ರವಿ ಬೆಳಗೆರೆ ಅವರು ಇದುವರೆಗೆ 80 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ನಾನು 70+ ಕೃತಿಗಳನ್ನು ಓದಿದ್ದೇನೆ. ಇವುಗಳಲ್ಲಿ ನನಗೆ ( ಗಳ ಪೈಕಿ)ತುಂಬಾ ಕಾಡಿದ್ದು “ಹೇಳಿ ಹೋಗು ಕಾರಣ” ಕಾದಂಬರಿ. ಕಥಾನಾಯಕ ಹಿಮವಂತ ಮತ್ತು ನಾಯಕಿ ಪ್ರಾರ್ಥನಾಳ ಪ್ರೇಮವೇ ಇಲ್ಲಿ ಪ್ರತಿ ಪುಟ ಪುಟದಲ್ಲಿ ಮಾರ್ಧನಿಸುತ್ತದೆ. ಪ್ರಾರ್ಥನಾಳನ್ನು ಅಗಾಧವಾಗಿ ಪ್ರೀತಿಸುವ ಹಿಮವಂತ್ ಅವಳನ್ನು ತನ್ನ ಕಿರುಬೆರಳ ತುದಿಯಿಂದಲೂ ಮುಟ್ಟದೆ ಪ್ರೀತಿಸುವ ಮಹಾನ್ ಪ್ರೇಮಿ. ಪ್ರೇಮ ಎಂಬುದು ಅಲ್ಲದೆಯೂ ಇರಬಲ್ಲದು ಎಂಬುದನ್ನು ಹಿಮವಂತ್ ಇಲ್ಲಿ ತೋರಿಸುತ್ತಾನೆ.
ಅವಳಿಗೋಸ್ಕರ ನಾನಾ ಸಂಕಷ್ಟಗಳನ್ನು ಅನುಭವಿಸಿ ಅವಳನ್ನು ಮೆಡಿಕಲ್ ಓದಿಸುತ್ತಾನೆ. ಪ್ರಾರ್ಥನಾ ಕೂಡಾ ಅವನನ್ನು ಪ್ರೀತಿಸುತ್ತಿದ್ದರೂ ನಿಧಾನವಾಗಿ ಅವಳ ಮನಸು ಹಿಮವಂತನ ಪವಿತ್ರ ಪ್ರೇಮದಿಂದ ಅವಳ ಸಹಪಾಠಿ ದೇಬು ಎಂಬ ಪ್ಲರ್ಟ್ ನ ಬಲೆಗೆ ಬಿದ್ದು ಅವನನ್ನೇ ಮದುವೆಯಾಗುತ್ತಾಳೆ. ಅವಳಿಗೋಸ್ಕರ ತನ್ನ ಬದುಕನ್ನೇ ಸವೆಸಿದ, ಭವಿತವ್ಯದ ಬಗ್ಗೆ ಕನಸು ಕಟ್ಟಿದ ಹಿಮವಂತನ ಕನಸಿನ ಸೌಧ ಕುಸಿಯುತ್ತದೆ. ಅವನು ಅನುಭವಿಸಿದ ನೋವು ಓದಿಯೇ ಅನುಭವಿಸಬೇಕು. ಪ್ರಾರ್ಥನಾ ಏಕೆ ಹಿಮವಂತ್ ನನ್ನು ಬಿಟ್ಟು ಹೋದಳು…? ನನಗೂ ಅವಳ ಕೈ ಹಿಡಿದು ಕೇಳಬೇಕೆನಿಸುತ್ತದೆ… ಹೇಳಿ ಹೋಗು ಕಾರಣ… ಅಂತ. ಹಿಮವಂತನ ಪಾತ್ರದ ಮೂಲಕ ಒಬ್ಬ ಮಹಾನ್ ಪ್ರೇಮಿಯೊಬ್ಬನನ್ನು ರವಿ ಚಿತ್ರಿಸಿದ್ದಾರೆ.